== ಕಾಡು ಬಿಕ್ಕೆ ಗಿಡ (ಡಿಕ್ಕಾಮಲಿ) == ಸಂ: ನಡಿಹಿಂಗು ಹಿಂ: ಡಿಕಾಮಿಲಿ ಮ: ಡಿಕಾಮಿಲಿ ಗು: ಡಿಕಾಮಿಲಿ ತೆ: ಕರಿಂಗ, ಕಂಬಿಲ್ ತ: ಮಂಜಿಬಿಕ್ಕಿ == ವರ್ಣನೆ == ಸಣ್ಣ ಪೊದೆ ಬಲವಾದ ಶಾಖೆಗಳಿರುವುವು. ತಿರುಳು ನುಣುಪು ಮತ್ತು ಹಸಿರು-ಹಳದಿ ಮಿಶ್ರಿತ ವರ್ಣದ್ದು. ಹಸಿರು ಒರಟಾದ ಎಲೆಗಳು ಮತ್ತು ಎಲೆಗಳ ಕೆಳಗಡೆ ನಯವಾದ ರೋಮಗಳಿರುತ್ತವೆ. ಕಾಯಿಗಳು ಹಸಿರಾಗಿದ್ದು ಗಿಡ್ಡದಾಗಿರುವುವು. ಹಣ್ಣಾದಾಗ ಹಸಿರು-ಹಳದಿ ವರ್ಣದಲ್ಲಿರುವುದು. ಒಳಗಡೆ ಗಟ್ಟಿಯಾದ ಬೀಜಗಳು ಮತ್ತು ಸಿಹಿಯಾದ ತಿರುಳಿರುವುದು.ಈ ಹಣ್ಣನ್ನು ತಿನ್ನುತ್ತಾರೆ ಮತ್ತು ಹಳ್ಳಿಯವರು ಕುಕ್ಕೆಗಳಲ್ಲಿ ತಂದು ಮಾರುತ್ತಾರೆ.ಈ ಗಿಡದಿಂದ ಸುರಿಯುವ ಹಾಲಿಗೆ ಅಹಿತಕರ ವಾಸನೆಯಿರುತ್ತದೆ.ಇದಕ್ಕೆ ಬಿಕ್ಕೆಬಂಕೆಯೆನ್ನುತ್ತಾರೆ.ಇದರಲ್ಲಿ ಗಾರ್ಡಿಸಿನ್ ಮತ್ತು ಡಿಕಾನೆಲಿ ಎಂಬ ಎರಡು ಬಗೆಯ ಅಂಟಿರುವುದು. == ಸರಳ ಚಿಕಿತ್ಸೆಗಳು == === ಜಂತು ಹುಳಕ್ಕೆ === ಬಿಕ್ಕೆಗಿಡದ ಬಂಕೆಯನ್ನು ನೀರಿನಲ್ಲಿ ಕರಗಿಸಿ ಇದರಲ್ಲಿ ಶುಭ್ರವಾದ ಅರಳೆಯ ಬತ್ತಿಯನ್ನು ತೋಯಿಸಿ, ಮಲದ್ವಾರದಲ್ಲಿ ಧರಿಸುವುದು. ಜಂತು ಹುಳಗಳು ಸಾಯುವುವು ಮತ್ತು ಮಲದೊಡನೆ ಬಿದ್ದು ಹೋಗುವುವು. === ವಾಸಿಯಾಗದೆ ಉಳಿದ ಹಳೇ ಹುಣ್ಣುಗಳಿಗೆ === ಬಹುಕಾಲದಿಂದ ವಾಸಿಯಾಗದೆ ಇರುವ ಹುಣ್ಣುಗಳಿಗೆ ಇದು ದಿವ್ಯಔಷಧಿ. ಈ ಗಿಡದ ಬಂಕೆಯ ಮುಲಾಮು ಮಾಡಿಗಾಯದ ಮೇಲೆ ಹಚ್ಚುವುದು.ಕೆಡುಕಿಲ್ಲದ ಉತ್ತಮವಾದ ಔಷಧಿ. ಶೀಘ್ರವಾಗಿ ಹಳೇ ಹುಣ್ಣುಗಳು ವಾಸಿಯಾಗುವುವು. === ವ್ರಣಗಳಲ್ಲಿ ಹುಳುಗಳು === ಕೆಲವು ಹಳೇ ಮತ್ತು ಬಹುಕಾಲದಿಂದ ವಾಸಿಯಾಗದ ವ್ರಣಗಳಲ್ಲಿ ಹುಳುಗಳು ಬೀಳುತ್ತವೆ. ಈ ಗಿಡದ ಬಂಕೆಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಹಚ್ಚುವುದು. ಹುಳುಗಳು ಸಾಯುತ್ತವೆ. ಮತ್ತು ವ್ರಣಗಳು ವಾಸಿಯಾಗುತ್ತವೆ. ಇದರಿಂದ ವ್ರಣಗಳ ಮೇಲೆ ನೊಣಗಳು ಸೇರುವುದಿಲ್ಲ. ಹಾಗಾಗಿ ವಿಷ ಕ್ರಿಮಿಗಳಿಂದ ವ್ರಣ ಕೊಳೆಯದಂತೆ ರಕ್ಷಿಸುವುದು. === ಹೊಟ್ಟೆಯಲ್ಲಿ ಹುಳುಗಳು === 1 ಗ್ರಾಂ ಈ ಗಿಡದಗೋಂದನ್ನು ಹರಳೆಣ್ಣೆಯಲ್ಲಿ ಬೆರೆಸಿ ಸೇವಿಸುವುದು.ಆಥವಾ ಈ ವನಮೂಲಿಯ 5 ಗ್ರಾಂ ಸೊಪ್ಪನ್ನು ನೀರಿನಲ್ಲಿ ಹಾಕಿ ಕಾಯಿಸಿ ಕಷಾಯ ಮಾಡಿಕುಡಿಸುವುದು. === ಒಣ ಕೆಮ್ಮು === ಬಿಕ್ಕೆಗಿಡದ ಸೊಪ್ಪು ಮತ್ತು ಬನ್ಸ್‍ಗಿಡದ ಎಲೆಗಳ ಅಷ್ಟಾಂಷ ಕಷಾಯ ಮಾಡಿ ದಿನಕ್ಕೆ ಎರಡು ವೇಳೆ ಕುಡಿಸುವುದು. === ಮೂಲವ್ಯಾಧಿಗೆ === ಈ ಗಿಡದ ಬಂಕೆಯನ್ನುಕೊಬ್ಬರಿಎಣ್ಣೆಯಲ್ಲಿ ಕಲಸಿ ಮೂಲದ ಮೂಳೆಗಳಿಗೆ ಲೇಪಿಸುವುದು.ಸುವರ್ಣಗೆಡ್ಡೆ ಸಾರು, ಪಲ್ಯ ಸೇವಿಸುವುದು. ಈ ಮೂಲಿಕೆಯ ಕ್ರಿಮಿನಾಶಕ ಗುಣದ ಬಗ್ಗೆ ಸಂಶೋಧನೆ ನಡೆಯುತ್ತಿದೆ. === ಸದಾಚಾರ === ರಾತ್ರಿ ಪ್ರಥಮ ಜಾವದೊಳಗೆ ಭೋಜನವನ್ನು ಮಾಡತಕ್ಕದ್ದು; ಸ್ವಲ್ಪ ಕಡಿಮೆಯಾಗಿ ಉಣ್ಣಬೇಕು; ಮತ್ತು ಜೀರ್ಣಕ್ಕೆ ಕಷ್ಟವಾದ ಪದಾರ್ಥವನ್ನು ವರ್ಣಿಸಬೇಕು. == ಉಲ್ಲೇಖ == ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು